Monday, May 5, 2014

ಹಿರಿಯರ ಮನೆಗೆ ಬೇಡಿಕೆ ಹೆಚ್ಚಳ

 
ಜೀವನದ ಸಂಧ್ಯಾಕಾಲದೊಳಗೆ ನನ್ನದೆನ್ನುವ ಹೊಸ ಸೂರೊಂದನ್ನು ಕಟ್ಟಬೇಕೆಂಬ ಹೆಬ್ಬಯಕೆ ಪ್ರತಿವ್ಯಕ್ತಿಯ ಮನಸಿನ ಮೂಲೆಯಲ್ಲಿ ಸುಪ್ತವಾಗಿ ಇರುತ್ತದೆ.
ಅದೇ ರೀತಿ, ವೃತ್ತಿಯ ಅಂಚಿನಲ್ಲಾದರೂ ‘ಸ್ವಂತ’ ಕನಸಿನ ಮನೆ ಹೊಂದಬೇಕೆಂಬ ಹಿರಿದಾದ ಆಸೆ ಎಲ್ಲ ನೌಕರ ವರ್ಗದಲ್ಲೂ ಮನೆಮಾಡಿರುತ್ತದೆ.
ಈ ಕನಸನ್ನು  ವೃತ್ತಿ, ಜೀವನದುದ್ದಕ್ಕೂ ಶಿಸ್ತುಬದ್ಧ ಉಳಿತಾಯದ ಮೂಲಕ ನನಸು ಮಾಡಿಕೊಳ್ಳಲು ಅವರು ಪ್ರಯತ್ನಿಸುತ್ತಲೇ ಇರುತ್ತಾರೆ.
ಇಂತಹ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ  ಸೂರಿನ ಆಸೆಗೆ ನೀರೆರೆಯುವ ಮತ್ತು ಅವರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಗೃಹಸಾಲ ನೀಡುವ ಹಣಕಾಸು ಸಂಸ್ಥೆಗಳು, ಬ್ಯಾಂಕ್‌ಗಳು ಸೇರಿದಂತೆ ರಿಯಲ್ ಎಸ್ಟೇಟ್ ಹೂಡಿಕೆದಾರರು ಪೈಪೋಟಿ ಯಲ್ಲಿ ಅವರಿಗಾಗಿ ಮೇಲಿಂದ ಮೇಲೆ ವಿಶೇಷ ಕೊಡುಗೆಗಳನ್ನು ಘೋಷಿಸು ತ್ತಲೇ ಇವೆ.
ಸದ್ಯದ ಸ್ಥಿತಿಯಲ್ಲಿ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಿವೃತ್ತರ ಹಾಗೂ ಹಿರಿಯ ನಾಗರಿಕರಿಗಾಗಿಯೇ ವಿಶೇಷ ಸೌಲಭ್ಯಗಳನ್ನು ಒಳಗೊಂಡ ಮನೆಗಳನ್ನು ನಿರ್ಮಿಸುವ ವಿಭಾಗವು ಹೆಚ್ಚಿನ ಪ್ರಗತಿ ಕಾಣುವಂತಹ ಎಲ್ಲ ಲಕ್ಷಣಗಳನ್ನು ತೋರುತ್ತಿವೆ.  ಭವಿಷ್ಯದಲ್ಲಿ ಈ ‘ಹಿರಿಯರ ವಸತಿ’ ನಿರ್ಮಾಣ ಉದ್ಯಮ ವಿಭಾಗವು ಭಾರಿ ಪ್ರಮಾಣದ ಹೂಡಿಕೆ ಆಕರ್ಷಿಸುವ ಮಟ್ಟಕ್ಕೆ ಬೆಳೆಯುವ ನಿರೀಕ್ಷೆಯಿದೆ ಎನ್ನುತ್ತದೆ ಆಸ್ತಿ ಸಲಹಾ ಸಂಸ್ಥೆ ‘ಸಿಬಿಆರ್‌ಇ’.
‘ಪ್ರಸ್ತುತ ಸಂದರ್ಭದಲ್ಲಿ ಭಾರತದಲ್ಲಿ ಹಿರಿಯ ನಾಗರಿಕರ ಮನೆಗಳ ನಿರ್ಮಾಣದಂತಹ ಯೋಜನೆಗಳು ಪರ್ಯಾಯ ಆಸ್ತಿ ಖರೀದಿ ಎಂಬ ವರ್ಗದ ಗ್ರಾಹಕ ಸಮೂಹವನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳ ಬಹುದಾದ ಉತ್ತಮ ಯೋಜನೆಗಳಾಗಿವೆ’ ಎನ್ನುತ್ತಾರೆ ‘ಸಿಬಿಆರ್‌ಇ’ಯ ದಕ್ಷಿಣ ಏಷ್ಯಾ ವಲಯದ ಅಧ್ಯಕ್ಷ ಅನ್ಷುಮನ್ ಮ್ಯಾಗ್ಜಿನ್.
ಸಾಂಪ್ರದಾಯಿಕ ರಿಯಲ್ ಎಸ್ಟೇಟ್ ಆಸ್ತಿ ವರ್ಗಗಳಾಚೆಗೆ ತಮ್ಮ ವ್ಯಾಪ್ತಿ ಯನ್ನು ವಿಸ್ತರಿಸಲು ಬಯಸಿರುವ ಹೂಡಿಕೆದಾರರು ಪರ್ಯಾಯ ಆಸ್ತಿ ವರ್ಗವಾದ ಹಿರಿಯ ನಾಗರಿಕರ ಮನೆ  ನಿರ್ಮಾಣ ಯೋಜನೆಗಳತ್ತ ದೃಷ್ಟಿ ನೆಟ್ಟಿದ್ದಾರೆ. ‘ನಿವೃತ್ತರ ಮನೆ’ಗಳೂ ಸೇರಿದಂತೆ ಈ ಹೊಸ ವಿಭಾಗದಲ್ಲಿ ಖಾಸಗಿ ಹೂಡಿಕೆದಾರರು ಗಮನಾರ್ಹ ಹೂಡಿಕೆ ಮಾಡುವ ನಿರೀಕ್ಷೆ ಇದೆ ಎಂಬುದು ಅನ್ಷುಮನ್ ಅವರ ಅನುಭವದ ನುಡಿ.
ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತುಲನಾತ್ಮಕವಾಗಿ ನಿಧಾನಗತಿ ಯಲ್ಲಿ ವಿಸ್ತರಣೆಯಾಗುತ್ತಿರುವ ಈ ಹೊಸ ಗ್ರಾಹಕ ವರ್ಗ ಕಾಣಿಸಿಕೊಳ್ಳುತ್ತಿರುವ ಹೊತ್ತಿನಲ್ಲೆ, ಟೆಕ್ ಪಾರ್ಕ್‌ಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳಂತಹ ನಿರ್ಮಾಣ ಯೋಜನೆಗಳೂ ಈ ಹೊಸ ವಿಭಾಗಕ್ಕೆ ಹೂಡಿಕೆ ವಿಚಾರದಲ್ಲಿ ಸ್ಪರ್ಧೆ ಒಡ್ಡುತ್ತಿವೆ.
 ಏತನ್ಮಧ್ಯೆ, ಕಳೆದ ಕೆಲ ದಶಕಗಳಲ್ಲಿ ದೊಡ್ಡ ಸಂಖ್ಯೆಯ ಹಿರಿಯ ನಾಗರಿಕರು ಭಿನ್ನ ಸೌಲಭ್ಯದ ಮನೆಗಳಿಗಾಗಿ, ನೆಮ್ಮದಿಯ ವಿಶ್ರಾಂತ ಬದುಕಿಗೆ ಹೊಂದಿಕೊಳ್ಳುವಂತಹ ಮನೆಗಳಿಗಾಗಿ ಮುಂದಿಡುತ್ತಿರುವ ಬೇಡಿಕೆಯು  ಆರೋಹಣ ಹಾದಿಯಲ್ಲಿದೆ. ಇದು ವಿಶಿಷ್ಟ ಸ್ವರೂಪದ ಮನೆಗಳ ನಿರ್ಮಾಣದ ಈ ವಿಭಾಗದಲ್ಲಿ ಪ್ರಗತಿಗೆ  ದೀರ್ಘಾವಧಿಯಲ್ಲಿ ಬಲ ನೀಡಲಿದೆ ಎನ್ನುವುದು ಅನ್ಷುಮನ್ ಅಭಿಮತ.
ಕೊವಾಯಿ ಪ್ರಾಪರ್ಟಿಸ್, ಆಶಿಯಾನಾ ಗ್ರೂಪ್ ಆಫ್ ಬಿಲ್ಡರ್ಸ್‌, ಬೃಂದಾವನ ಸಿನಿಯರ್ ಸಿಟಿಜೆನ್, ಸಿನಿಯರ್ ಸಿಟಿಜೆನ್ ಫೌಂಡೇಷನ್ ಮತ್ತು ಕ್ಲಾಸಿಕ್ ಪ್ರಮೋಟರ್ಸ್‌ ಸೇರಿದಂತೆ ಹಲವಾರು ರಿಯಲ್ ಎಸ್ಟೇಟ್ ಅಭಿವೃದ್ಧಿದಾರರು ದೇಶದಲ್ಲಿ ಈಗಾಗಲೆ ಹಿರಿಯ ನಾಗರೀಕರ ಗೃಹ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಟಾಟಾ ಹೌಸಿಂಗ್‌ನಂತಹ ಪ್ರಮುಖ ಅಭಿವೃದ್ಧಿದಾರರು ಕೂಡ ಹಿರಿಯರ ಮನೆಗಳ ನಿರ್ಮಾಣದತ್ತ ಒಲವು ತೋರಿ ಕೊಡುಗೆಗಳನ್ನು ಘೋಷಿಸುತ್ತಿವೆ. ಭವಿಷ್ಯದ ಭರವಸೆಯಂತಿರುವ ಈ  ವಿಭಾಗದ  ಮಹತ್ವವನ್ನು ಈಗಾಗಲೆ ಬಹುತೇಕ ಹೂಡಿಕೆದಾರರು ಅರ್ಥೈಸಿ ಕೊಂಡಿರುವ ಸಾಧ್ಯತೆ ಇದ್ದು, ಇದಕ್ಕೆ ಸಾಕ್ಷಿಯನ್ನುವಂತೆ ದೇಶದಾದ್ಯಂತ  ಹಿರಿಯ ನಾಗರೀಕರ ಮನೆ ಯೋಜನೆ ಗಳು ಹೆಚ್ಚುತ್ತಿರುವ ಚಿತ್ರಣ ಕಂಡು ಬರುತ್ತಿದೆ ಎನ್ನುತ್ತಾರೆ ಅನ್ಷುಮನ್‌.
ಸವಾಲುಗಳು
ದೇಶದ ರಿಯಲ್ ಎಸ್ಟೇಟ್ ರಂಗದಲ್ಲಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಈ ಹಿರಿಯರಿಗಾಗಿ ವಸತಿ ಸಮುಚ್ಚಯ ನಿರ್ಮಾಣ ವಿಭಾಗದ ಮುಂದಿರುವ ಸದ್ಯದ ಪ್ರಮುಖ ಸವಾಲುಗಳೆಂದರೆ; ಆದಷ್ಟೂ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಮತ್ತು ಇಂತಹ ಯೋಜನೆಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲ ಸಾಮರ್ಥ್ಯವುಳ್ಳ ವೃತ್ತಿಪರ ಮಾನವ ಶಕ್ತಿಯ ಕೊರತೆಯಾಗಿದೆ.
ಇದೇ ವೇಳೆ ದೇಶದಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳ ಅಭಿವೃದ್ಧಿ ಯಿಂದಾಗಿ ಮಾನವ ಜೀವಿತಾವಧಿಯ ಪ್ರಮಾಣದಲ್ಲಿ ಸ್ಥಿರ ಬೆಳವಣಿಗೆಯಾಗು ತ್ತಿದ್ದು, ಜತೆಗೆ ಹಲವಾರು ಕಾರಣಗಳಿಂದ ಬಹುದೊಡ್ಡ ಪ್ರಮಾಣದ ಜನಸಂಖ್ಯೆಯು ತಮ್ಮ ವಸತಿಯನ್ನು ಮೇಲಿಂದ ಮೇಲೆ ಬದಲಾಯಿಸುತ್ತಲೇ ಇರುವ ವಿದ್ಯಮಾನ ಕಂಡುಬರುತ್ತಿದೆ.
ಭಾರತದಲ್ಲಿ ಚಿಕ್ಕ ಕುಟುಂಬಗಳ ಸಂಖ್ಯೆ ವೃದ್ಧಿಸುತ್ತಿರುವ ಮಧ್ಯೆಯೇ, ಪ್ರಸ್ತುತವಿರುವ ಭಾರತದ ಜನಸಂಖ್ಯೆ ಯು 2050ರ ವೇಳೆಗೆ ಅಗಾಧ ಪ್ರಮಾಣಕ್ಕೆ ತಲುಪುವ ನಿರೀಕ್ಷೆಯಿದೆ ಎನ್ನುತ್ತಾರೆ ಅನ್ಷುಮನ್.
ಏತನ್ಮಧ್ಯೆ,ಪ್ರಮುಖವಾಗಿ ಹೆಚ್ಚುತ್ತಿರುವ ಸುರಕ್ಷತೆಯ ಅಪೇಕ್ಷೆ, ಸ್ವಾವಲಂಬಿತನ, ನಿವೃತ್ತಿಯ ನಂತರವೂ ಸಂಪಾದನೆಯ ದುಡಿಮೆ... ಹೀಗೆ ಹಲವು ವಿಧಗಳಲ್ಲಿ  ಬದಲಾಗುತ್ತಿರುವ ಹಿರಿಯ ನಾಗರೀಕರ ಆಲೋಚನಾ ಕ್ರಮಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ವರದಾನವಾಗುವಂತಿವೆ.
ಇದರೊಂದಿಗೆ ಹಿರಿಯ ನಾಗರಿಕ ರಿಗಾಗಿರುವ ಎಲ್ಲ ವಿಶೇಷ ಸವಲತ್ತುಗಳ ಸದುಪಯೋಗ ಪಡೆಯುವ ನಿಟ್ಟಿನಲ್ಲಿ ಕುಟುಂಬ ವರ್ಗದವರು ಮನೆಯ ಹಿರಿಯರ ಹೆಸರಿನಲ್ಲಿ ಕಡಿಮೆ ಬಡ್ಡಿಗೆ ದೊರೆಯುವ ಗೃಹಸಾಲ ಪಡೆಯುವುದು ಮತ್ತು ರಿಯಾಯ್ತಿ ದರದ ಮನೆಗಳನ್ನು ಖರೀದಿಸುತ್ತಿರುವುದೂ ಹೆಚ್ಚುತ್ತಿದೆ.
 ಈ ಎಲ್ಲ ಕಾರಣಗಳಿಂದ  ಹಿರಿಯರ ಮನೆ ಯೋಜನೆಗಳು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ  ಭರದಿಂದ ಅಭ್ಯುದಯ ಹೊಂದುತ್ತಿರುವ ಜತೆಗೆ ಹೂಡಿಕೆದಾರರನ್ನು ತಮ್ಮತ್ತ ಬರಸೆಳೆಯುತ್ತಿವೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಏಪ್ರಿಲ್ 30, 2014 ರಂದು ಪ್ರಕಟವಾದ ಲೇಖನ)

ಖಾಲಿ ಉಳಿದ 1.1 ಕೋಟಿ ಮನೆ!

 
ಒಂದೆಡೆ ಕೋಟಿಗಟ್ಟಲೆ ಜನರು ತಲೆ ಮೇಲೊಂದು ಸೂರಿಲ್ಲದೆ ಪರಿತಪಿಸು ತ್ತಿರುವಾಗಲೇ, ಇನ್ನೊಂದೆಡೆ ಕೋಟಿ ಗಟ್ಟಲೆ ಹೂಡಿ ನಿರ್ಮಿಸಿಟ್ಟಿರುವ ಕೋಟಿಗಟ್ಟಲೆ ಮನೆಗಳು ಕೊಳ್ಳುವವ ರಿಲ್ಲದೆ ಖಾಲಿ ಬಿದ್ದಿರುವ ವೈರುಧ್ಯದ ವಿಧ್ಯಮಾನವು ದೇಶದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹಿಡಿದ ಕೈಗನ್ನಡಿಯಂತಿದೆ.
ದೇಶದಲ್ಲಿ ಸುಮಾರು 2.5 ಕೋಟಿ ಮನೆಗಳ ಕೊರತೆಯ ಮಧ್ಯೆಯೇ, 1.10 ಕೋಟಿ ಮನೆಗಳು ಮಾರಾಟವಾಗದೆ ಖಾಲಿ ಉಳಿದಿವೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಖಾಲಿ ಉಳಿದಿರುವ ಒಟ್ಟು ಮನೆಗಳ ಪೈಕಿ ಶೇ 10ರಷ್ಟು ಮನೆಗಳು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿವೆ ಎನ್ನುತ್ತಾರೆ ನಗರಾ ಭಿವೃದ್ಧಿ ಕಾರ್ಯದರ್ಶಿ ಸುಧೀರ್ ಕೃಷ್ಣನ್ ಅವರು.
ಇತ್ತೀಚೆಗೆ ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟಡ್ ಸರ್ವೆಯರ್ (ಆರ್‌ಐಸಿಎಸ್) ಸಂಸ್ಥೆ ‘ರಿಯಲ್ ಎಸ್ಟೇಟ್ ಸಮಾವೇಶ’ ಆಯೋಜಿಸಿತ್ತು. ಅಲ್ಲಿ ಈ ವಿಚಾರವಾಗಿ ಮಾತನಾಡಿದ ಸುಧೀರ್‌, ವಸತಿ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರವು ಬಾಡಿಗೆ ಕಾನೂನನ್ನು ಪರಿಷ್ಕರಿಸಲಿದೆ ಎಂದು ಹೇಳಿದ್ದರು.
ಸರ್ಕಾರಿ ಸಂಸ್ಥೆಗಳು ಅಥವಾ ಖಾಸಗಿ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರು ನಿರ್ಮಿಸುವ ವಸತಿ ಯೋಜನೆಗಳನ್ನು ನಿರ್ವಹಣೆಗಾಗಿ ಸ್ಥಳೀಯ ಪೌರಸಂಸ್ಥೆಗಳಿಗೆ ವಹಿಸಿ ಕೊಡಬೇಕು ಎಂಬುದು ಅವರ ಅಭಿಮತ.
‘ಒಂದು ಅಂದಾಜಿನ ಪ್ರಕಾರ ನಾವು 2.5 ಕೋಟಿ ಮನೆಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. 2011ರ ಅಂಕಿ ಅಂಶಗಳ ಪ್ರಕಾರವೇ ದೇಶದ ವಿವಿಧೆಡೆ 1.1 ಕೋಟಿ ಮನೆಗಳು ಮಾರಾಟ ವಾಗದೇ ಹಾಗೆ ಖಾಲಿ ಉಳಿದಿವೆ’.
ಇದು ಸುಧೀರ್ ಅವರು ಬಹಿರಂಗ ಪಡಿಸಿದ ದೇಶದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಸದ್ಯದ ವಾಸ್ತವ ಪರಿಸ್ಥಿತಿ. ಖಾಲಿ ಉಳಿದಿರುವ ಒಟ್ಟು ವಸತಿ ಸಂಕೀಣರ್ಗಳ ಪೈಕಿ ಶೇ 10ರಷ್ಟು ಮನೆಗಳು ದೆಹಲಿಗೆ ಹೊಂದಿಕೊಂಡಂತೆ ಇರುವ ‘ರಾಷ್ಟ್ರೀಯ ರಾಜಧಾನಿ ಪ್ರದೇಶ’ದಲ್ಲಿಯೇ (ಎನ್‌ಸಿಆರ್‌) ಇವೆ ಎನ್ನುವುದರತ್ತಲೂ ಅವರು ಗಮನ ಸೆಳೆಯುತ್ತಾರೆ.
12ನೇ ಪಂಚವಾರ್ಷಿಕ ಯೋಜನೆಯ (2012-ರಿಂದ 2017ವರೆಗಿನ ಅವಧಿಯ) ಆರಂಭದಲ್ಲಿ ದೇಶದಲ್ಲಿ ಜನರಿಗೆ ಸುಮಾರು  1.88 ಕೋಟಿ ಮನೆಗಳ ಕೊರತೆ ಇತ್ತು ಎಂದು ಕೇಂದ್ರ ಸರ್ಕಾರ ಲೆಕ್ಕ ಹಾಕಿದೆ. ಈ ಕೊರತೆಯಲ್ಲಿ ಶೇ 90ಕ್ಕೂ ಅಧಿಕ ಪಾಲು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯವುಳ್ಳ ವರ್ಗಕ್ಕೆ ಸೇರಿದೆ.
ಶೇ 70ರಷ್ಟು ಜನರು ನಗರ ಪ್ರದೇಶದಲ್ಲಿಯೇ ಬದುಕಬೇಕಾಗಿದೆ ಎನ್ನುವ ಅವರು  ನಿಧಾನಗತಿಯ ನಗರೀಕರಣ ಕುರಿತಂತೆ ತಮ್ಮ ಕಳವಳ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಶೇ 31ರ ಮಟ್ಟದಲ್ಲಿ ಆಗುತ್ತಿರುವ ನಗರೀಕರಣ ನಮಗೆ ಯಾವುದಕ್ಕೂ ಸಾಲದು. ಇದೊಂದು ಗಂಭೀರವಾದ ವಿಷಯವಾಗಿದೆ ಎನ್ನುತ್ತಾರೆ.
ನಿಧಾನಗತಿಯ ನಗರೀಕರಣವು ಗ್ರಾಮೀಣ ಭಾಗದ ಭೂಮಿಯ ಮೇಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ ನಡೆಸುತ್ತಿದೆ. ಇದರ ಪರಿಣಾಮವಾಗಿ ಭೂ ಹಿಡುವಳಿಗಳು ವಿಘಟನೆಯಾಗುತ್ತ  ರೈತರಿಗೆ ಅನಾನುಕೂಲತೆ ಉಂಟಾಗುತ್ತಿದೆ. ಸದ್ಯದ ಪರಿಸ್ಥಿತಿಯು ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ತುಂಬಾ ಉತೇಜನಕಾರಿಯಾಗಿದೆ.
ಬಡವರ್ಗದ ಜನತೆಗೆ ಮನೆ ಒದಗಿಸಿಕೊಡುವುದಾಗಿ ಸರ್ಕಾರವೇನೊ ಭಾರಿ ಭರವಸೆ ನೀಡಿದೆ. ಆದರೆ ಸದ್ಯ ಖಾಲಿ ಉಳಿದಿರುವ ಮನೆಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು ಸಾಧ್ಯವಾಗದು ಎನ್ನುವ  ಬೇಸರವೂ ಸುಧೀರ್ ಅವರದ್ದಾಗಿದೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಏಪ್ರಿಲ್ 16, 2014 ರಂದು ಪ್ರಕಟವಾದ ಲೇಖನ)

ಭೂಮಿ ಬೆಲೆ ಶೇ 26 ಏರಿಕೆ

ಬೆಂಗಳೂರಿನಲ್ಲಿ ಹೆಚ್ಚುತ್ತಲೇ ಇರುವ ಉದ್ಯೋಗಾವ ಕಾಶ, ಉತ್ತಮ ಹವೆ, ವೈವಿಧ್ಯಮಯ ಜೀವನಶೈಲಿ ಮೊದಲಾದ ಹಲವು ಕಾರಣಗಳಿಂದಾಗಿ ಜನರ ವಲಸೆ ಹೆಚ್ಚುತ್ತಲೇ ಇದೆ. ಇದು ಈ ಮಹಾನಗರದ ‘ರಿಯಲ್‌ ಎಸ್ಟೇಟ್’ ಉದ್ಯಮಕ್ಕೆ ಉತ್ತೇಜನಕಾರಿ ಯಾಗಿಯೇ ಇದೆ. ಇದರಿಂದಾಗಿ ಸ್ಥಿರಾಸ್ತಿಗಳ ಬೆಲೆಯಲ್ಲಿ ಇತ್ತೀಚೆಗೆ ಮತ್ತೆ ವೇಗದ ಗತಿಯಲ್ಲಿ ಏರಿಕೆ ಕಾಣಿಸಲಾರಂಭಿಸಿದೆ.
ವಸತಿ ನಿರ್ಮಾಣಕ್ಕೆ ಅನುಕೂಲಕಾರಿಯಾದ ಸಮತಟ್ಟು ಭೂ ಪ್ರದೇಶಗಳ ಬೆಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ 26.1ರಷ್ಟು ಏರಿಕೆ ಕಂಡುಬಂದಿದೆ.

ಇನ್ನೊಂದೆಡೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಅದರ ಸೇವಾ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿರುವ ಬೆಳವಣಿಗೆ ಕೂಡ ಕಂಪೆನಿ ಕಚೇರಿಗಳನ್ನು ನೆಲೆಗೊಳಿಸಲು ವಾಣಿಜ್ಯ ಬಳಕೆ ಕಟ್ಟಡಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡುತ್ತಿದೆ. ಇದೂ ಸಹ ಬೆಂಗಳೂರಿನ ಹೊರವಲಯದಲ್ಲಿ ಜಮೀನು ಬೆಲೆಯಲ್ಲಿ ಹೆಚ್ಚಳ ಉಂಟಾಗಲು ಕಾರಣವಾಗಿದೆ.
ಬೆಂಗಳೂರಿನಲ್ಲಷ್ಟೇ ಅಲ್ಲ, ಮುಂಬೈನಲ್ಲಿಯೂ ವಸತಿ ನಿರ್ಮಾಣ ಯೋಜನೆ ಭೂಮಿಯ ಬೆಲೆ ಕಳೆದ ಎರಡು ವರ್ಷಗಳಲ್ಲಿ ಶೇ 35.2ರಷ್ಟು ಏರಿಕೆ ಕಂಡಿದೆ. ಬದಲಾದ ರಿಯಲ್ ಎಸ್ಟೇಟ್ ನಿಯಮಗಳು ಮತ್ತು ಸ್ಥಿರಾಸ್ತಿ ಬೆಲೆಯಲ್ಲಿ ಹೆಚ್ಚಳದ ಕಾರಣದಿಂದಾಗಿ   ಈ ಬೆಲೆ ಏರಿಕೆ ಆಗಿದೆ ಎನ್ನುತ್ತದೆ ಜಾಗತಿಕ ಆಸ್ತಿ ಸಮೀಕ್ಷೆ ಸಂಸ್ಥೆ ‘ನೈಟ್ ಫ್ರಾಂಕ್’ನ ವರದಿ.
ಏಷ್ಯಾದ ಪ್ರಮುಖ 13 ನಗರಗಳಲ್ಲಿ ವಸತಿ ನಿರ್ಮಾಣ ಮತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಭೂಮಿ ಬೆಲೆಯನ್ನು ಮಾರುಕಟ್ಟೆ ದರದ ಮಾನದಂಡದ ಮೇಲೆ ವಿಶ್ಲೇಷಣೆಗೆ ಒಳಪಡಿಸಿದಾಗ ಬೆಂಗಳೂರು ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕಿಂತಲೂ (ಎನ್‌ಸಿಆರ್) ಮುಂಬೈನಲ್ಲಿಯೇ ಭೂಮಿ ಬೆಲೆ ಹೆಚ್ಚು ಗಗನಮುಖಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ವಸತಿ ನಿರ್ಮಾಣ ಭೂಮಿ ಬೆಲೆಯಲ್ಲಿ ಬೆಂಗಳೂರು ಶೇ 26.1ರಷ್ಟು ಮತ್ತು ‘ಎನ್‌ಸಿಆರ್’ ಶೇ 24.9ರಷ್ಟು ಏರಿಕೆ ಕಂಡುಬಂದಿದ್ದರೆ, ಮುಂಬೈನಲ್ಲಿ ಶೇ 35.2 ರಷ್ಟು ಹೆಚ್ಚಳವಾಗಿದೆ. ಏತನ್ಮಧ್ಯೆ, ಕಚೇರಿ ಸ್ಥಳಾವಕಾಶ ಅಭಿವೃದ್ಧಿ ಭೂಮಿ ಬೆಲೆ ‘ಎನ್‌ಸಿಆರ್’ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ ಶೇ  16.3 ಹಾಗೂ 12.9 ರಷ್ಟು ಏರಿಕೆ ದಾಖಲಿಸಿದೆ. ಆದರೆ, ಮುಂಬೈನಲ್ಲಿ ಮಾತ್ರ ವಾಣಿಜ್ಯ ಬಳಕೆ ಕಟ್ಟಡಗಳ ಸ್ಥಳಾವಕಾಶಕ್ಕೆ (ನಿವೇಶನ) ಕಳೆದ ಎರಡು ವರ್ಷಗಳಲ್ಲಿ ಬೇಡಿಕೆ ಸ್ವಲ್ಪ ಕಡಿಮೆಯಾಗಿದೆ. ಮುಂಬೈನಲ್ಲಿ ವಾಣಿಜ್ಯ ಬಳಕೆ ಭೂಮಿಯ ಬೆಲೆಯಲ್ಲಿ ಶೇ 13.1ರಷ್ಟು ಕುಸಿತ ಕಂಡುಬಂದಿದೆ ಎನ್ನುತ್ತಾರೆ ನೈಟ್ ಫ್ರಾಂಕ್‌ನ ಮುಖ್ಯ ಆರ್ಥಿಕ ತಜ್ಞ ಮತ್ತು ಸಂಶೋಧನಾ ನಿದೇರ್ಶಕರಾಗಿರುವ ಸಮಂತಕ್ ದಾಸ್.
‘ಕಾನೂನುಗಳಲ್ಲಿ ಕೆಲವು  ಬದಲಾವಣೆಗಳಾಗಿರುವುದರಿಂದ ಮುಂಬೈನಲ್ಲಿ ವಸತಿ ನಿರ್ಮಾಣ ಅಭಿವೃದ್ಧಿಗೆ ಬಳಕೆ ಮಾಡುವ ಜಮೀನು ಬೆಲೆಯಲ್ಲಿ ಏರಿಕೆಯಾಗಿದೆ. ಆದರೆ, ಕಚೇರಿ ಸ್ಥಳಾವಕಾಶ ವಿಭಾಗದಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗಿರುವುದೇ ಈ ವಿಭಾಗದಲ್ಲಿ ಪ್ರಗತಿ ಎಂಬುದು ಇಳಿಮುಖ ಹಾದಿಯಲ್ಲಿದೆ’ ಎನ್ನುತ್ತದೆ ವರದಿ.
ಇದೇ ವೇಳೆ ‘ಎನ್‌ಸಿಆರ್’ ವಸತಿ ಅಭಿವೃದ್ಧಿ ಭೂಮಿ ಸೂಚ್ಯಂಕ ಶೇ 24.9ರಷ್ಟು ಮೇಲೇರಿದೆ. ಇದರಿಂದಾಗಿ ಈ ಭಾಗದಲ್ಲಿ ಬಳಕೆಗೆ ಸಿದ್ಧವಾಗಿರುವ ಭೂ ಪ್ರದೇಶದ ಬೇಡಿಕೆ ಸತತ ಹೆಚ್ಚುತ್ತಲೇ ಇದೆ.ಅಭಿವೃದ್ಧಿಗೊಂಡಿರುವ ಕನ್ಹಾಟ್‌ಪ್ಲೇಸ್‌ ಮತ್ತು ಸಾಕೆತ್ ಮಾರುಕಟ್ಟೆಗಳಿಗೆ ಹೋಲಿಸಿದರೆ ಇನ್ನೂ ಪ್ರಗತಿ ಹೊಂದುತ್ತಿರುವ ಗುಡಗಾಂವ್ ಮಾರುಕಟ್ಟೆ ಪ್ರದೇಶದಲ್ಲಿನ ‘ಕಚೇರಿ ಬಳಕೆಗೆ ಸಿದ್ಧವಾಗಿರುವ ಭೂ ಪ್ರದೇಶ’ದ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಸೀಮಿತ ಲಭ್ಯತೆ, ಕಳಪೆ ಗುಣಮಟ್ಟದ ಮೂಲಸೌಕರ್ಯ ಮತ್ತು ಅನುಮತಿ ಪ್ರಾಧಿಕಾರದ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ವಸತಿ ಯೋಜನೆಗಳ ನಿರ್ಮಾಣ ಕಾರ್ಯ ಮುಂಬೈನಲ್ಲಿ ಸದ್ಯ ಸ್ವಲ್ಪ ಹಿನ್ನಡೆ ಕಂಡಿದೆ. ಆದರೆ, ಮುಂಬರುವ ದಿನಗಳಲ್ಲಿ ಮತ್ತೆ ನಿರ್ಮಾಣ ಚಟುವಟಿಕೆ ಗರಿಗೆದರಲಿದ್ದು, ಮುಂಬೈನ ಭೂಮಿ ಬೆಲೆ ನಿರಂತರ ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನುತ್ತದೆ ವರದಿ.
ಹೂಡಿಕೆ ಇಳಿಮುಖ
ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆಯಾಗುವ ಬಂಡವಾಳ ಪ್ರಮಾಣ ಕಳೆದ ವರ್ಷ ಭಾರಿ ಕುಸಿತ ಕಂಡಿದೆ. 2013ರಲ್ಲಿ ಕೇವಲ 120 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು (ರೂ.7800 ಕೋಟಿ) ಹೂಡಿಕೆಯಾಗಿದೆ. ಅಂದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿನ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಹೂಡಿಕೆ ಶೇ 65ರಷ್ಟು ಕುಸಿತ ಕಂಡಿದೆ. ಹಾಗಿದ್ದೂ  ದೇಶವು ಏಷ್ಯಾ ಪೆಸಿಫಿಕ್ (ಎಪಿಎಸಿ) ವಲಯದಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ ಎನ್ನುತ್ತದೆ ಜಾಗತಿಕ ಆಸ್ತಿ ಸಲಹಾ ಸಂಸ್ಥೆ ‘ಕುಷ್ಮನ್ ಅಂಡ್ ವೆಕ್‌ಫೀಲ್ಡ್’.
2012ನೇ ಸಾಲಿನಲ್ಲಿ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದ ಹೂಡಿಕೆ ಪ್ರಮಾಣ 340 ಕೋಟಿ ಡಾಲರ್‌ಗಳಿಗೆ (ಸುಮಾರು ರೂ.21 ಸಾವಿರ ಕೋಟಿ) ತಲುಪಿತ್ತು.
‘ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕಳೆದ ವರ್ಷ ಅಂದಾಜು 120 ಕೋಟಿ ಅಮೆರಿಕನ್ ಡಾಲರ್‌ನಷ್ಟು ಬಂಡವಾಳ ಹೂಡಿಕೆಯಾಗಿದೆ. ‘ಎಪಿಎಸಿ’ ವಲಯದಲ್ಲಿನ ರಿಯಲ್‌ ಎಸ್ಟೇಟ್‌ ಬಂಡವಾಳ ಹೂಡಿಕೆಯ ದೇಶಗಳ ಪಟ್ಟಿಯಲ್ಲಿ ಭಾರತ 10ನೇ ಸ್ಥಾನದಲ್ಲಿದೆ’ ಎನ್ನುತ್ತದೆ ವರದಿ. 2013ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ‘ಎಪಿಎಸಿ’ ವಲಯಕ್ಕೆ ಒಟ್ಟಾರೆಯಾಗಿ 48,700 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು (ರೂ.31.65 ಲಕ್ಷ ಕೋಟಿ) ದಾಖಲೆ ಪ್ರಮಾಣದ ಬಂಡವಾಳ ಹರಿದು ಬಂದಿದೆ.
ದೇಶವಾರು ಹೂಡಿಕೆ ಕುರಿತು ನಡೆಸಿದ ಸಮೀಕ್ಷೆಯಲ್ಲಿ 35,800  ಕೋಟಿ ಡಾಲರ್‌ಗಳಷ್ಟು (ರೂ.23.27 ಲಕ್ಷ ಕೋಟಿ) ಬಂಡವಾಳ ಆಕರ್ಷಿಸುವ ಮೂಲಕ ಚೀನಾ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನವನ್ನು 4460 ಕೋಟಿ ಡಾಲರ್‌ (ರೂ.2.90 ಲಕ್ಷ ಕೋಟಿ) ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಟ್ಟಿರುವ ಜಪಾನ್ (3ನೇ ಸ್ಥಾನ) ಪಡೆದಿದೆ.
ಫಿಲಿಫೈನ್ಸ್, ಇಂಡೊನೇಷ್ಯಾ, ಥೈಲ್ಯಾಂಡ್ ಮತ್ತು ತೈವಾನ್‌ನಂತಹ ಮಾರುಕಟ್ಟೆಗಳಲ್ಲಿ ಗಣನೀಯ ಪ್ರಮಾಣದ ಹೂಡಿಕೆಯ ಕುಸಿತ ಕಾಣಿಸಿಕೊಂಡಿರುವ ನಡುವೆಯೂ ಭಾರತ ‘ಎಪಿಎಸಿ’ ವಲಯದಲ್ಲಿ 10ನೇ ಸ್ಥಾನ ಕಾಯ್ದುಕೊಂಡಿದೆ.

2013ರಲ್ಲಿ ಭಾರತದಲ್ಲಿ ಭೂಮಿ ಖರೀದಿಗೆ ಹೂಡಿಕೆ ಯಾಗಿರುವ 83.80 ಕೋಟಿ ಡಾಲರ್  (ರೂ.5447 ಕೋಟಿ) ಬಂಡವಾಳದಲ್ಲಿ ಬಹುತೇಕ ಹೂಡಿಕೆ (24.70 ಕೋಟಿ ಡಾಲರ್‌ಗಳಷ್ಟು)  ಕಚೇರಿ ಸ್ಥಳಾವಕಾಶಕ್ಕೆ ಸಂಬಂಧಿಸಿದ ಭೂಮಿಯ ಮೇಲೆಯೇ ತೊಡಗಿಸಲಾಗಿದೆ. ಹಾಗಿದ್ದೂ ಒಟ್ಟಾರೆ ಭೂಮಿಯ  ಮೇಲಿನ ಹೂಡಿಕೆಯಲ್ಲಿ ಶೇ 61 ಮತ್ತು ಕಚೇರಿ ಸ್ಥಳಾವಕಾಶ ಹೂಡಿಕೆಯಲ್ಲಿ ಶೇ 77ರಷ್ಟು ಇಳಿಕೆ ಕಂಡುಬಂದಿದೆ.
‘ಸದ್ಯದ ಸನ್ನಿವೇಶದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆ ತೀವ್ರ ಅನಿಶ್ಚಿತ ಸ್ಥಿತಿಗೆ ತಲುಪಿದೆ. ಇದು ಹೂಡಿಕೆದಾರರಲ್ಲಿ ಕಳವಳ ಉಂಟುಮಾಡಿದೆ. ಇದಕ್ಕೆ ಲೋಕಸಭೆ ಚುನಾವಣೆ ಎಂಬ ರಾಜಕೀಯ ಬದಲಾವಣೆ ಕಾಲ ಕೂಡ ಕಾರಣವಾಗಿದೆ’ ಎನ್ನುತ್ತಾರೆ ಕುಷ್ಮನ್ ಅಂಡ್ ವೆಕ್‌ಫೀಲ್ಡ್ ಸಂಸ್ಥೆಯ ದಕ್ಷಿಣ ಏಷ್ಯಾ ವಲಯದ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿದೇರ್ಶಕ ಸಂಜಯ್ ದತ್.
‘ಈಗಿನ ಇಳಿಮುಖ ಹಾದಿಯ ಪಯಣದ ನಡುವೆಯೂ ಹೂಡಿಕೆದಾರರಿಗೆ ಭಾರತ ‘ಎಪಿಎಸಿ’ ವಲಯದಲ್ಲಿ ಭವಿಷ್ಯದ ಭರವಸೆಯ ಪ್ರಮುಖ ಹೂಡಿಕೆ ತಾಣವಾಗಿಯೇ ಗೋಚರಿಸುತ್ತಿದೆ. ಇದಕ್ಕೆ 2013ರ ವರೆಗೆ ಖಾಸಗಿ ಕ್ಷೇತ್ರಕ್ಕೆ ವರ್ಷದಿಂದ ವರ್ಷಕ್ಕೆ ಶೇ 13ರಷ್ಟು ಹೆಚ್ಚಳವಾಗುತ್ತ ಹರಿದು ಬರುತ್ತಿರುವ ಹೂಡಿಕೆಯೇ ಸಾಕ್ಷಿ’ ಎನ್ನುತ್ತಾರೆ ಸಂಜಯ್. ದೇಶದ ಆರ್ಥಿಕ ವ್ಯವಸ್ಥೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 2015ರ ಹೊತ್ತಿಗೆ ಗಮನಾರ್ಹವಾದ ಪ್ರಗತಿ ಕಾಣಿಸಿಕೊಳ್ಳಲಿದೆ ಎಂಬ ಆಶಾಭಾವ ವನ್ನು ಮಾರುಕಟ್ಟೆ ಪರಿಣಿತರು ವ್ಯಕ್ತಪಡಿಸುತ್ತಾರೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಏಪ್ರಿಲ್ 09, 2014 ರಂದು ಪ್ರಕಟವಾದ ಲೇಖನ)
 

Tuesday, March 4, 2014

ಬದುಕಿನ ‘ಕಹಿ’ಗೆ ಉದ್ಯಮವೇ ‘ಸಿಹಿ’

‘ನೆಕ್ಟರ್ ಫ್ರೆಶ್‌’ ಉತ್ಪನ್ನಗಳೊಂದಿಗೆ ಛಾಯಾ ನಂಜಪ್ಪ
ಸವಾಲುಗಳನ್ನು ಮೆಟ್ಟಿ ನಿಲ್ಲುವುದ ರಲ್ಲಿಯೇ ತೃಪ್ತಿಯಿದೆ’ ಎನ್ನುವ ಕೊಡಗಿನ ಛಾಯಾ ನಂಜಪ್ಪ, ಬದುಕಿನಲ್ಲಿ ಬಂದ ಕಷ್ಟಗಳನ್ನು ಮೆಟ್ಟಿ ನಿಂತ­ವರು. ಸದ್ಯ, ಭಾರತದಲ್ಲಿಯೇ ಆಧುನಿಕ ತಂತ್ರ­ಜ್ಞಾನವುಳ್ಳ ಅತಿದೊಡ್ಡ ಜೇನುತುಪ್ಪ ಸಂಸ್ಕರಣಾ ಘಟಕ  ನಡೆಸುತ್ತಿರುವ ಮಹಿಳೆ ಎಂಬ ಹಿರಿಮೆಗೆ ಪಾತ್ರ­ರಾ­ದವರು. ಹಲವು ಸಾಹಸಗಳನ್ನು ಕೈಗೊಂಡಿರುವ ಛಲಗಾತಿ. ಜಾಗತಿಕ ಮಾರುಕಟೆಯತ್ತ ಇದೀಗ ಚಿತ್ತ ನೆಟ್ಟಿ­ರುವ ಅವರ ಯಶೋಗಾಥೆಯನ್ನು ಅವರಿಂದಲೇ ಕೇಳೊಣ...
ನಿಸರ್ಗ ರಮಣೀಯ ಕೊಡಗು ನನ್ನ ತವರು. ಶಿಕ್ಷಕರಾದ ಅಪ್ಪ, ಅಮ್ಮನ ಏಕೈಕ ಮುದ್ದಿನ ಮಗಳು ನಾನು. ಒಂದು ಕಾಲದಲ್ಲಿ ವಾರಿಗೆಯ ಗೆಳತಿಯರೆಲ್ಲ ನನ್ನ ನೋಡಿ ‘ಪುಟ್‌ಚೇಂಗಿ ಪುಟ್ಟಂಡು ನೀಡನ್ನಕ್ಕೆ‘ (ಹುಟ್ಟಿದರೆ ಹುಟ್ಟಬೇಕು ನಿನ್ನಂಗ) ಎಂದು ಅನ್ನುವಾಗಲೆಲ್ಲ ಸ್ವಪ್ನದ ಹೊಳೆಯಲ್ಲಿ ತೇಲಿದವಳು ನಾನು.ವಿಧಿವಿಲಾಸ ಎನ್ನುವಂತೆ ಸಿಹಿ ಸ್ವಪ್ನದಲ್ಲಿ ತೇಲುವ ವಯಸ್ಸಿನಲ್ಲಿ ಧುತ್ತೆಂದು ಎದುರಾದ ದುಃಸ್ವಪ್ನ ದಂತಹ ಘಟನೆಗಳು ನನ್ನನ್ನು ಬದುಕೆಂಬ ಪುಸ್ತಕದ ಕರಾಳ ಅಧ್ಯಾಯಕ್ಕೆ ತಂದು ನಿಲ್ಲಿಸಿದವು.
ದಯವಿಟ್ಟು ಅದೇನೆಂದು ಕೆದಕಿ ಕೇಳದಿರಿ. ಏಕೆಂದರೆ ‘ಜಗವೆಲ್ಲ ನಗುತಿರಲಿ, ಜಗದಳಲು ನನಗಿರಲಿ’ ಎನ್ನುವಾಕೆ ನಾನು.... ನನ್ನ ಸಂಕಲ್ಪ ಶಕ್ತಿಗೆ ಸವಾಲಾದ ಆ ಗಳಿಗೆಯಲಿ ನನ್ನ ಕಂಡು ಅನುಕಂಪ ನುಡಿಯುವವರೆ ಎಲ್ಲ. ಆದರದು ನನಗೆ ಬೇಕಿರಲಿಲ್ಲ. ಏಕೆಂದರೆ ಧೈರ್ಯ, ಶೌರ್ಯ, ನಿಷ್ಠೆ, ಸತ್ಯ ಸಂಧತೆ ಹಾಗೂ ನೇರನುಡಿಗೆ ಹೆಸರಾದ ಕೊಡವರ ಕುವರಿ ನಾನು.
ಈ ನಡುವೆಯೇ ನಾನು ದೂರಶಿಕ್ಷಣದ ಮೂಲಕ ಸಮೂಹ ಸಂವಹನ ವಿಷಯದಲ್ಲಿ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಪಡೆದೆ. ಆದರೆ ಕೆಲಸಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಬೆಂಗಳೂರಿನ ನೀರವ ಕತ್ತಲೆಯ ಮಧ್ಯೆ ಏಕಾಂಗಿಯಾಗಿ ಕುಳಿತು ‘ಮುಂದೇನು ಮಾಡುವುದು?’ ಎಂದು ಚಿಂತಿಸುತ್ತಿದ್ದ ಗಳಿಗೆಯಲ್ಲಿ ಹೊಳೆದದ್ದೇ ಸ್ವಂತ ಉದ್ಯಮ. ಆಗ ನನ್ನ ನೋವಿಗೆ ಅದೊಂದೇ ಸೂಕ್ತ ಮದ್ದಾಗಿ ಕಂಡಿತು.
ಯಾವ ಉದ್ಯಮ? ಯಾರು ಮಾರ್ಗದರ್ಶಕರು? ಗೊತ್ತಿಲ್ಲ.  ನನ್ನ ಕುಟುಂಬದಲ್ಲಿ ಈ ಮೊದಲು ಯಾರೂ ಉದ್ಯಮಿಗಳಿರಲಿಲ್ಲ. ಆಗ ನನಗೆ ಮೊದಲು ನೆನಪಿಗೆ ಬಂದದ್ದೇ ತವರೂರಿನ ಪ್ರಮುಖ ಉತ್ಪನ್ನ­ಗಳಲ್ಲೊಂದಾದ ಜೇನುತುಪ್ಪ. ಜೇನುತುಪ್ಪ ಮಾರಾ­ಟವನ್ನೇ ಉದ್ಯಮವಾಗಿಸಿಕೊಳ್ಳಲು ನಿರ್ಧರಿಸಿದೆ. ಆಗ, ನೆರವಿಗೆ ಬಂದದ್ದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ. ಅದು ನನಗೆ ಯೋಜನೆಯೊಂದರಲ್ಲಿ ಸಬ್ಸಿಡಿ ಹೆಸರಿನಲ್ಲಿ ಆರ್ಥಿಕ ನೆರವು ನೀಡುವ ಮೂಲಕ ನನ್ನಾಸೆಗೆ ನೀರೆರಿಯಿತು.
ಜತೆಗೆ ’ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್’ ನನ್ನ ಯೋಜನಾ ವರದಿಯನ್ನು ನೋಡಿದಾಕ್ಷಣವೇ  ಸಾಲ ನೀಡಲು ಮುಂದೆ ಬಂತು. ಅದರೊಂದಿಗೆ ಅಮ್ಮ ಕೂಡ ಆಭರಣ ಅಡವಿಟ್ಟು ಹಾಗೂ ತಮ್ಮ ಸಣ್ಣ ಉಳಿತಾಯದ ಹಣ ನೀಡಿ ಹರಸಿದರು. ಆಗ ನಾನು ಪುಣೆಗೆ ತೆರಳಿ ಜೇನುತುಪ್ಪ ಸಂಸ್ಕರಣೆ ಕುರಿತಂತೆ ತರಬೇತಿ ಪಡೆದು ಮರಳಿದೆ.
ಮೊದಲ ಹೆಜ್ಜೆ
2007ರಲ್ಲಿ ಬೆಂಗಳೂರಿನ ಬೊಮ್ಮನ ಹಳ್ಳಿಯಲ್ಲಿ ನನ್ನ ಕನಸಿನ ಮೂರ್ತರೂಪ ವಾದ ಚಿಕ್ಕ ಪ್ರಮಾಣದ ‘ಜೇನುತುಪ್ಪ ಸಂಸ್ಕರಣಾ ಘಟಕ’ ತೆರೆಯುವ ಮೂಲಕ ಕುಟುಂಬದಲ್ಲಿ ಮೊದಲಿಗಳಾಗಿ ಉದ್ಯಮಕ್ಕೆ ಅಡಿಯಿಟ್ಟೆ.ಉದ್ಯಮವೆಂಬ ನೀರಿಗೆ ಇಳಿದಾಯ್ತು. ಚಳಿ, ನಡುಕವೆಂದರೆ ಕೇಳುವವರು ಯಾರು? ಕಚ್ಚಾವಸ್ತು, ಮಾರುಕಟ್ಟೆ ಮತ್ತು ಅದರ ತಂತ್ರ ಎಲ್ಲವೂ ನನಗೆ ಅಪರಿಚಿತ. ಆದರೂ ಎದೆಗುಂದದೇ ಮುನ್ನುಗಿ ನಡೆದೆ.
ಹೀಗೆ ನಡೆಯುವಾಗ ಅಲ್ಲಲ್ಲಿ ಎಡವಿದ್ದು ಉಂಟು. ಎದ್ದು ಸಾವರಿಸಿಕೊಂಡು ನಡೆಯುತ್ತಾ ಹೋದೆ. ಸ್ಥಳೀಯ ಮಾರುಕಟ್ಟೆಗೆ ಪರಿಶುದ್ಧ, ಗುಣಮಟ್ಟದ ಜೇನುತುಪ್ಪ  ಒದಗಿಸಬೇಕೆಂಬುದು ನನ್ನ ಉದ್ಯಮದ ಮೊದಲ ಗುರಿಯಾಗಿತ್ತು. ಅಷ್ಟರಲ್ಲಾಗಲೇ ಗುರಿ ಸಾಧನೆಯಲ್ಲಿ ಹೆದ್ದಾರಿಯನ್ನು ಮುಟ್ಟಿದ್ದಾಗಿತ್ತು. ಈ ಹೊತ್ತಿಗೆ ಮಾರುಕಟ್ಟೆಯಲ್ಲಿದ್ದ ನನ್ನ ‘ನೆಕ್ಟರ್ ಫ್ರೆಶ್‌’ ಜೇನು ಉತ್ಪನ್ನದ ಗುಣಮಟ್ಟದ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿತ್ತು.
‘ನೆಕ್ಟರ್ ಫ್ರೆಶ್‌’
20 ವರ್ಷಗಳಿಗಿಂತ ಅಧಿಕ ಕಾಲದಿಂದ ದೇಶದ ಪ್ರತಿಷ್ಠಿತ ಪಂಚತಾರಾ ಹೋಟೆಲ್‌ಗಳ ‘ಉಪಹಾರ’ದ ಟೇಬಲ್ ಮೇಲೆ ತಳವೂರಿ ಪ್ರಾಬಲ್ಯ ಸಾಧಿಸಿದ್ದ ವಿದೇಶಿ  ಬ್ರಾಂಡ್‌ಗಳನ್ನು ಕದಲಿಸಿತು ‘ನೆಕ್ಟರ್ ಫ್ರೆಶ್‌’. ಇಂಥದೊಂದು ಸಾಹಸ ಮಾಡಿದ ದೇಶದ ಮೊದಲ ಬ್ರಾಂಡ್ ಜೇನುತುಪ್ಪ ನಮ್ಮದು ಎಂದು ಹೇಳಿಕೊಳ್ಳಲು ಹೆಮ್ಮೆ ನನಗೆ. ಈ ಮಧ್ಯೆ ಬೆಂಗಳೂರಿನ ಸಂಸ್ಕರಣಾ ಘಟಕವನ್ನು ಮೈಸೂರಿಗೆ ಸ್ಥಳಾಂತರಿಸಲೇಬೇಕಾದ ಅನಿವಾರ್ಯ ಎದುರಾಯಿತು. ಆಗ ನಾನು ಎಷ್ಟೊಂದು  ಆಘಾತಕ್ಕೊಳಗಾದೆ ಎಂದರೆ ಅದು ಹೇಳಲಸಾಧ್ಯ. ಆಗ ನೆರವಿಗೆ ಬಂದದ್ದೇ ನನ್ನ ಮನೋಬಲ.
‘ಆಗುವುದೆಲ್ಲ ಒಳ್ಳೆಯದಕ್ಕೆ’ ಎಂದು ಕೊಂಡು 2010ರಲ್ಲಿ ಬೆಂಗಳೂರು ಘಟಕವನ್ನು ಮೈಸೂರಿಗೆ ಸ್ಥಳಾಂತರಿಸಿದೆ. ಅಲ್ಲಿ ದೂರದ ನೆಂಟರಾದ ರಾಜಪ್ಪ ಭೇಟಿಯಾದರು. ಅವರನ್ನು ವ್ಯಾಪಾರದ ಪಾಲುದಾರರನ್ನಾಗಿ ಸೇರಿಸಿಕೊಂಡೆ. ಈ ಪಾಲುದಾರಿಕೆಯಲ್ಲಿ ಶೇ 75ರಷ್ಟು ಪಾಲು ನನ್ನದಾಗಿಯೇ ಮುಂದುವರಿಯಿತು.
ಸದ್ಯ, ಮೈಸೂರಿನಲ್ಲಿರುವ ನಮ್ಮ ಘಟಕದಲ್ಲಿ ಪ್ರತಿ ತಿಂಗಳಿಗೆ 30 ಟನ್ ಜೇನುತುಪ್ಪ ಸಂಸ್ಕರಣ ಕಾರ್ಯ ನಡೆಯುತ್ತದೆ. ಈ ಘಟಕ  ಭಾರತ ದಲ್ಲಿಯೇ ಆಧುನಿಕ ತಂತ್ರಜ್ಞಾನದ ಅತಿದೊಡ್ಡ ಜೇನುತುಪ್ಪ ಸಂಸ್ಕರಣಾ ಘಟಕ ಎನಿಸಿಕೊಂಡಿದೆ. ದೇಶದ ಮೊದಲ ಪಾಲಿಪ್ರಾಪಲಿನ್ ಪ್ಯಾಕೇಜಿಂಗ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಘಟಕವನ್ನು ಹೊಂದಿದ ದೇಶದ ಪ್ರಥಮ ಮಹಿಳೆ ನಾನು ಎಂದು ಹೇಳಿಕೊಳ್ಳುವುದು ನನಗೆ ಹೆಮ್ಮೆ.
ಇಂದು ದೊಡ್ಡ ಮಾಲ್‌ಗಳಲ್ಲಿ ಕಂಡು ಬರುವ ಪ್ರತಿಷ್ಠಿತ ಕಂಪೆನಿಗಳ ಬಹುತೇಕ ಬ್ರಾಂಡ್‌ಗಳು ಸೇರಿದಂತೆ  ಕೇರಳದ ಆರ್ಯುವೇದ ಪದ್ಧತಿಯಡಿ ಸಂಸ್ಕರಿಸಿದ ಜೇನುತುಪ್ಪದ ಉತ್ಪನ್ನಗಳು ನಮ್ಮ ಮೈಸೂರು ಸಂಸ್ಕರಣಾ ಘಟಕದಲ್ಲಿಯೇ ಪ್ಯಾಕ್ ಆಗುತ್ತವೆ.
ದಕ್ಷಿಣ ಭಾರತದಲ್ಲಿರುವ ಅರಣ್ಯವಾಸಿಗಳು, ಗುಡ್ಡಗಾಡಿನವರು ಮತ್ತು ಬುಡಕಟ್ಟು ಜನರಿಂದ ಅತಿದೊಡ್ಡ ಪ್ರಮಾಣದಲ್ಲಿ ಜೇನು ಖರೀದಿಸು ತ್ತಿರುವುದು ನಮ್ಮ ಸಂಸ್ಥೆ. ಇವರಲ್ಲಿ ಸಿದ್ದಿಗಳೆಂದರೆ ವಿಶೇಷ ಒಲವು ನಮಗೆ. ಜತೆಗೆ ಈ ಎಲ್ಲ ಜನರ ಸಬಲೀಕರಣದಲ್ಲಿ ನಮ್ಮದೊಂದು ಪುಟ್ಟ ಪಾಲಿದೆ ಎನ್ನುವ ತೃಪ್ತಭಾವವೂ ಇದೆ. ಮಧ್ಯವರ್ತಿಗಳನ್ನು ಬಿಟ್ಟು ನೇರವಾಗಿ ನಮ್ಮಂದಿಗೆ ವ್ಯವಹರಿಸಿರಿ. ಜೇನುತುಪ್ಪಕ್ಕೆ ನಿಮಗೆ ಉತ್ತಮ ಬೆಲೆ ಕೂಡ ನೀಡುತ್ತೇವೆ ಎಂದು ಗ್ರಾಮೀಣ ಭಾಗದ ಚಿಕ್ಕ ರೈತರಿಗೆ ಕಿವಿಮಾತು ಹೇಳುತ್ತೇವೆ.
ಈ ಹಿಂದೆ ಪ್ರತಿಷ್ಠಿತ ಹೋಟೆಲ್‌ ಗಳಲ್ಲಿದ್ದ ವಿದೇಶಿ ಬ್ರಾಂಡ್‌ಗಳ ಪ್ರಾಬಲ್ಯ ಮುರಿದ ಸಾಹಸ ಕುರಿತು ಹೇಳಿದ್ದೆನಲ್ಲ. ಅದರ ಮುಂದುವರಿದ ಭಾಗ,  ಮಾರುಕಟ್ಟೆ ಪೈಪೋಟಿಯ ಕಥೆ ಕೇಳಿ. ‘ನೆಕ್ಟರ್ ಫ್ರೆಶ್‌’ ಖರೀದಿಸಿದರೆ ಬರೀ ಜೇನುತುಪ್ಪ ಮಾತ್ರ ಸಿಗುತ್ತದೆ. ನಾವು ಜೇನುತುಪ್ಪದ ಜತೆಗೆ ಜಾಮ್ ಕೊಡುತ್ತೇವೆ ಎಂದು ಆಸ್ಟ್ರೇಲಿಯಾ ಮತ್ತು ಜರ್ಮನ್‌ ಕಂಪೆನಿಗಳು ಪೈಪೋಟಿ ನಡೆಸಿದವು. ನಾವೂ ಸಹ ಆಗ ಸಂಸ್ಕರಣಾ ಘಟಕವೊಂದರ ಸಹಕಾರದಲ್ಲಿ ಜಾಮ್ ತಯಾರಿಸಿ ಮಾರುಕಟ್ಟೆಗೆ ತಂದು ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ನೀಡಿದೆವು.
ಇಂದು ನಮ್ಮ ಬ್ರಾಂಡ್‌ ಉತ್ಪನ್ನಗಳು ತಾಜ್, ಲೀಲಾ, ವಿಂಡ್ಸರ್ ಮ್ಯಾನರ್, ಲಿ ಮೆರಿಡಿಯನ್, ಐಟಿಸಿ ಸೇರಿದಂತೆ ಬೆಂಗಳೂರಿನ ಬಹಳಷ್ಟು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಸ್ಥಾನ ಪಡೆದಿವೆ.  ಮಲೇಷ್ಯಾ, ದುಬೈ ಸೇರಿದಂತೆ ಮಧ್ಯ ಪ್ರಾಚ್ಯ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ.
ಮುಂಬರುವ ದಿನಗಳಲ್ಲಿ ‘ಯೂರೋಪಿಯನ್ ಯೂನಿ­ಯನ್ ಸ್ಟ್ಯಾಂಡರ್ಡ್’ ತಲುಪುವುದು ನಮ್ಮ ಗುರಿ. ವಿಶ್ವದ ಎಲ್ಲ ಮೂಲೆಗಳಿಗೂ ನಮ್ಮ ಉತ್ಪನ್ನ­ಗಳನ್ನು ತಲುಪಿಸುವ ಮಹತ್ವಾಕಾಂಕ್ಷೆ ಇದೆ. ಇದನ್ನೆಲ್ಲ ಸಾಧಿಸಲು ನೀವು ಮಾರುಕಟ್ಟೆಯಲ್ಲಿ ಮಾಡಿದ ‘ಜಾದೂ’ ಯಾವುದು ಎಂದು ಅನೇಕರು ಕೇಳುತ್ತಾರೆ. ಅವರಿಗೆ ಹೇಳುವುದಿಷ್ಟೆ,  ‘ರಾಜಿಯಾಗದ ಗುಣ­ಮಟ್ಟ’. ಎರಡು ವರ್ಷದ ಹಿಂದೆ ಐಎಸ್‌ಒ 22000; -2005 ಪ್ರಮಾಣಪತ್ರವೂ ಲಭಿಸಿದೆ.
ಅಷ್ಟೇ ಅಲ್ಲದೆ, ನಾವು  ಸಾಧಾರಣ ಜೇನುತುಪ್ಪದ ಜತೆಗೆ ಬೇರೆ ಬೇರೆ ಋತುಗಳಿಗೆ ಅನುಸಾರವಾಗಿ ಅರಳುವ ಹೂವುಗಳ ಮಕರಂದದಿಂದ ಪ್ರತ್ಯೇಕವಾಗಿ ಸಂಗ್ರಹಿಸಲಾದ ಜೇನುತುಪ್ಪವನ್ನು 15 ಬಗೆ ಸ್ವಾದಗ ಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದೇವೆ. ಇದು ಕೂಡ ದೇಶಿ ಮಾರುಕಟ್ಟೆಯಲ್ಲಿ ನಮ್ಮ ಮೊದಲ ಸಾಹಸ.
ಕೊಡಗಿನ ಕಾಫಿ
ಜೇನಿನೊಂದಿಗೆ ಕೊಡಗಿನ ಕಾಫಿಯನ್ನೇಕೆ ನಮ್ಮ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಬಾರದು ಎಂಬ ಯೋಚನೆ ಹೊಳೆಯಿತು. 5 ತಿಂಗಳ ಹಿಂದಷ್ಟೇ  ಅದು ಕೂಡ ಕೈಗೂಡಿತು. ಇಂದು ಮಾರುಕಟ್ಟೆಯಲ್ಲಿ ನಮ್ಮ ಕಾಫಿ ಘಟಕ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಸದ್ಯ ಭಾರತದ ಮಾರುಕಟ್ಟೆಯಲ್ಲಿರುವ ಬಹಳಷ್ಟು ಕಾಫಿ ಬ್ರಾಂಡ್‌ ಕಂಪೆನಿಗಳು ನಮಗೆ ಪ್ಯಾಕ್ ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ.
ಈ ನಡುವೆ ವಹಿವಾಟು ವಿಸ್ತಾರಗೊಳ್ಳುತ್ತಾ ನಡೆದಂತೆ ಈಗಿರುವ ಘಟಕದಲ್ಲಿ ಎಲ್ಲ ಬೇಡಿಕೆಯನ್ನೂ ಪೂರೈಸುವುದು ಕಷ್ಟ ಎನ್ನುವುದು ಅರಿವಿಗೆ ಬಂತು. ಜತೆಗೆ ಭವಿಷ್ಯದ ಯೋಜನೆಗಳಿಗಾಗಿ ಸುಸಜ್ಜಿತ ನೂತನ ಘಟಕವೊಂದನ್ನು ತೆರೆಯುವ ಯೋಚನೆ ಮೂಡಿತು. ಅದು ಕೂಡ ಕಾರ್ಯರೂಪಕ್ಕೆ ಬಂದಾಗಿದೆ.
ಮರೆಯದೇ ಹೇಳಲೇಬೇಕಾದ ಪ್ರಮುಖ ವಿಷಯವೆಂದರೆ, ತೋಟಗಾರಿಕೆ ಇಲಾಖೆ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೇಡಾ), ಸಂಸ್ಕರಿತ ಆಹಾರ ಸಚಿವಾಲಯ ಸೇರಿದಂತೆ ಹಲವಾರು ಇಲಾಖೆಯ ಅಧಿಕಾರಿಗಳು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡುತ್ತಾ ಬರುತ್ತಿದ್ದಾರೆ.
ಈ ಬಾರಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನಮ್ಮ ಬ್ರಾಂಡ್‌ ಉತ್ಪನ್ನವನ್ನು ರಾಷ್ಟ್ರೀಯ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಜತೆಗೆ ಈ ವರ್ಷ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟವು ಮಹಿಳಾ ದಿನಾಚರಣೆಯಂದು ‘ಮಹಿಳಾ ಉದ್ಯಮಿ’ ಪ್ರಶಸ್ತಿ ನೀಡಿ ಗೌರವಿಸಿದೆ.  ಹಲವು ಇಲಾಖೆಗಳು ಸನ್ಮಾನಿಸಿವೆ. ಸದ್ಯ,  ನಾನು ರಾಷ್ಟ್ರೀಯ ಜೇನು ಮಂಡಳಿ ಸದಸ್ಯೆ.
ಇಂದಿನ ದಿನ ಉದ್ಯಮವೊಂದು ಯಶಸ್ಸು ಗಳಿಸಬೇಕೆಂದರೆ ಅದಕ್ಕೆ ಜಾಹೀರಾತಿನ ಬೆಂಬಲ, ಜತೆಗೆ ವ್ಯವಸ್ಥಿತ ವಾದ ಒಂದು ತಂಡ ಬೇಕು. ಆದರೆ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಈವರೆಗಿನ ಹೋರಾಟದಲ್ಲಿ ಒಬ್ಬಂಟಿ ಯಾಗಿರುವ ನಾನು ಜಾಹೀರಾತಿಗಾಗಿ ಒಂದು ಪೈಸೆ ಕೂಡ ಖರ್ಚು ಮಾಡಿಲ್ಲ!
ಪ್ರತಿ ರಂಗದಲ್ಲಿ ಸಮಾನತೆ ಬಯಸುವ ಹೆಣ್ಣು ಅನುಕಂಪ ಬಯಸಿ ಬದುಕಬಾರದು. ಪ್ರತಿಯೊಬ್ಬ­ರಿಗೂ ಅವರದೇ ಆದ ಸಾಮರ್ಥ್ಯ ಇರುತ್ತದೆ. ಅದನ್ನು ಬಂಡವಾಳವನ್ನಾಗಿಸಿಕೊಂಡು ಬದುಕಬೇಕೆಂಬ ಧ್ಯೇಯ ನನ್ನದು. ಇದನ್ನು ನಾನು ಉಪನ್ಯಾಸ ನೀಡಲು ಹೋಗುವ ಪ್ರತಿ ಸಂಸ್ಥೆಯಲ್ಲಿ ಹೇಳುತ್ತ ಬಂದಿರುವೆ.
ಮರೆತಿದ್ದೆ; ಪ್ರತಿಯೊಂದು ಪ್ರಾದೇಶಿಕ ಭಾಗವು ತನ್ನದೇ ಆದ ವಿಶಿಷ್ಠ ರುಚಿಯ ತಿಂಡಿ, ತಿನಿಸು ಹೊಂದಿ­ರುತ್ತದೆ. ಅದೇ ರೀತಿ ಕರಕುಶಲ ವಸ್ತುಗಳನ್ನು ಕೂಡ. ಇಂತಹವನ್ನು ಉತ್ತಮ ಗುಣಮಟ್ಟದಲ್ಲಿ ತಯಾರಿಸಿ ನಮಗೆ ಪೂರೈಸಿದರೆ ಅವನ್ನೆಲ್ಲಾ ನಮ್ಮದೇ ಬ್ರಾಂಡ್‌­ನಡಿ ಮಾರುಕಟ್ಟೆಗೆ ಪರಿಚಯಸಬೇಕೆಂಬ ಆಸೆ . ಆಸಕ್ತಿ ಉಳ್ಳವರು ಮೊ: 9448680861 ‌ಸಂಖ್ಯೆಗೆ ಕರೆ ಮಾಡಬಹುದು.
ಮಹಿಳೆಯರಿಗಾಗಿ
ಮಾರ್ಚ್‌ 9ರಂದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಮ್ಮ ಹೊಸ ಸಂಸ್ಕರಣಾ ಘಟಕವು ಕಾರ್ಯ ಆರಂಭಿಸಲಿದೆ. ರೂ.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿ­ರುವ ಈ ಘಟಕವು ಪ್ರತಿ ತಿಂಗಳಿಗೆ 200 ಟನ್ ಜೇನು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವು ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅಲ್ಲಿ ಖಾದಿ ಬಟ್ಟೆಗಳು ಸೇರಿದಂತೆ ದೇಶದ ಎಲ್ಲ ಭಾಗಗಳಲ್ಲಿ ದೊರೆಯುವ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಜತೆಗೆ ಕೊಡಗು ರುಚಿಯ ವಿಶೇಷ ರೆಸ್ಟೋರೆಂಟ್  ತೆರೆಯುವ ಯೋಚನೆಯಿದೆ. ಇದರಿಂದ ಗ್ರಾಮೀಣ ಜನರ ಕೌಶಲ ಪ್ರೋತ್ಸಾಹಿಸುವ ಮತ್ತು ಅವರ ಸಬಲೀಕರಣದಲ್ಲಿ ಭಾಗಿಯಾಗುವ ಆಶಯ ನಮ್ಮದು.
ಇದರೊಂದಿಗೆ ಮಹಿಳೆಯರು ನಡೆಸುತ್ತಿದ್ದ, ಆದರೆ ವೈಫಲ್ಯಗೊಂಡ ಘಟಕಗಳನ್ನು ಖರೀದಿಸಿ ಅವುಗಳನ್ನು ಪುನಃಶ್ಚೇತನಗೊಳಿಸುವ ಮೂಲಕ ಒಂದು ಕ್ಲಸ್ಟರ್ ಮಾಡಿ, ಗುಣಮಟ್ಟ ನಿಯಂತ್ರಣವನ್ನು ನಮ್ಮಲ್ಲಿಟ್ಟುಕೊಂಡು  ಹಪ್ಪಳ, ಚಟ್ನಿಪುಡಿ, ಉಪ್ಪಿನಕಾಯಿ ಸೇರಿದಂತೆ ವಿವಿಧ ಮಸಾಲೆ ಪದಾರ್ಥಗಳನ್ನು ನಮ್ಮ ಬ್ರಾಂಡ್‌ನಲ್ಲಿ ಮಾರುಕಟ್ಟೆ ಪರಿಚಯಿಸುವ ಆಲೋಚನೆಯೂ ಇದೆ.ನಮ್ಮ ಸಂಸ್ಥೆ ನೇರವಾಗಿ 50 ಜನರಿಗೆ, ಪರೋಕ್ಷವಾಗಿ 200 ಮಂದಿಗೆ ಉದ್ಯೋಗ ಒದಗಿಸಿದೆ. ಅವರಲ್ಲಿ ಶೇ 70ರಷ್ಟು ಜನರು ಅನಕ್ಷರಸ್ಥರು ಎನ್ನುವುದು ಗಮನಾರ್ಹ. ಹೊಸ ಘಟಕದ ಆರಂಭದ ನಂತರ ಒಟ್ಟು 150 ಜನರಿಗೆ ನೇರವಾಗಿ ಉದ್ಯೋಗ ನೀಡಿದಂತಾಗಲಿದೆ.

(
ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಮಾರ್ಚ್ 05, 2014 ರಂದು ಪ್ರಕಟವಾದ ಲೇಖನ)

ಬೆಂಗಳೂರು; ಗರಿಗೆದರಿದ ಮನೆ ಖರೀದಿ

ಹೊಸ ವರ್ಷದಲ್ಲಿ ದೇಶದ ವಿವಿಧ ರಂಗಗಳ ವಹಿವಾಟುಗಳು ಗರಿಗೆದರುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯು ಪುನಶ್ಚೇತನ ಕಾಣಲಿದೆ ಎಂದು ಕೇಳಿ ಬರುತ್ತಿದ್ದ ಮಾರುಕಟ್ಟೆ ಪರಿಣಿತರ ಭವಿಷ್ಯ ಸಾಕಾರಗೊಳ್ಳುತ್ತಿರುವ ಬೆಳವಣಿಗೆಗಳು ಕಂಡುಬರುತ್ತಿವೆ.
ಕಳೆದ ಸಾಲಿನಲ್ಲಿ ಹಲವಾರು ಕಾರಣಗಳಿಂದ ಹಳಿತಪ್ಪಿ ಪಾತಾಳಕ್ಕೆ ಕುಸಿದಿದ್ದ ರಿಯಲ್ ಎಸ್ಟೇಟ್ ಉದ್ಯಮ ದಲ್ಲಿ ಹೊಸ ವರ್ಷದಲ್ಲಿ ಚೇತರಿಕೆ ಕಂಡುಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ‘2014ರಲ್ಲಿ ಬೆಂಗಳೂರು ಮನೆ ಖರೀದಿಯಲ್ಲಿ ಅತಿ ಹೆಚ್ಚು  ಆದ್ಯತೆಯ ನಗರ’ ಎಂಬ ಸಮೀಕ್ಷೆಯೂ ಹೊರಬಿದ್ದಿದೆ.
ನೂತನ ವರ್ಷದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಸ್ಥಿತಿಗತಿಯನ್ನು ಅರಿಯುವ ನಿಟ್ಟಿನಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ನಗರ ಪ್ರದೇಶಗಳ ಶ್ರಮಿಕ ವರ್ಗದ ಬಹುತೇಕರು ಬೆಂಗಳೂರಿನಲ್ಲಿ ಮನೆ ಖರೀದಿಸುವ ತಮ್ಮ ಮನದಾಸೆಯನ್ನು ಹೊರಗೆ ಹಾಕಿದ್ದಾರೆ.
ದಿನೇ ದಿನೇ ಅಭಿವೃದ್ಧಿ ಹೊಂದು ತ್ತಿರುವ ಉತ್ತಮ ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯಗಳು ಮತ್ತು ಅತ್ಯಾವಶ್ಯಕ ಸೌಲಭ್ಯಗಳು... ಈ ಕಾರಣಗಳಿಂದ ವಾಣಿಜ್ಯ ಸಂಕೀರ್ಣ ಗಳಿಗಿಂತಲೂ ವಸತಿ ಸಮುಚ್ಛಯಗಳಲ್ಲಿ ಮಾಡಿದ ಹೂಡಿಕೆಯು ಹೆಚ್ಚು ಲಾಭ ದಾಯಕವಾಗಲಿದೆ ಎಂಬ ಲೆಕ್ಕಾಚಾರ ವನ್ನು ನಗರ ಪ್ರದೇಶದ ಶೇ 49ರಷ್ಟು ಉದ್ಯೋಗಿಗಳು ಸಮೀಕ್ಷೆಯಲ್ಲಿ ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಾರೆ ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್.
ಸಮೀಕ್ಷೆ ವೇಳೆ ಶೇ 52ರಷ್ಟು ವೃತ್ತಿಪರರು ದೇಶದ ಮೊದಲ ಶ್ರೇಣಿಯ ನಗರಗಳಾದ ಬೆಂಗಳೂರು (1), ಮುಂಬೈ (2), ದೆಹಲಿ (3), ಕೋಲ್ಕತ್ತ (4), ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್‌) ಮತ್ತು ಹೈದರಾಬಾದ್‌ನಲ್ಲಿನ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹೂಡಿಕೆ ಮಾಡಿ ಗರಿಷ್ಠ ಮಟ್ಟದ ಆದಾಯ ಗಳಿಸಬೇಕೆಂಬ ಬಯಕೆ ಹೊಂದಿರುವುದಾಗಿ ಹೇಳಿದ್ದಾರೆ.
ಬೆಂಗಳೂರಿಗೆ ಆದ್ಯತೆ
ಮನೆ ಖರೀದಿಗಾಗಿ ಹುಡುಕಾಟದಲ್ಲಿರುವವರ ಗಮನವನ್ನು ನಿರಂತರವಾಗಿ ಸೆಳೆಯುತ್ತಿರುವ ಮೆಟ್ರೊಪಾಲಿಟನ್ ನಗರಗಳ ಪೈಕಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್ ಮತ್ತು ಪುಣೆ ಈ ಐದು ಪ್ರಮುಖ ನಗರಗಳಲ್ಲಿ ಮನೆ ಖರೀದಿಸುವ ಆಸೆಯನ್ನು ಈ ಸಮೀಕ್ಷೆಗೆ ಪ್ರತಿಕ್ರಿಯಿಸಿರುವವರಲ್ಲಿ ಶೇ 52ರಷ್ಟು ಜನರು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಬಹುತೇಕರು ಮನೆ ಖರೀದಿಸಲು ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ರಿಯಲ್ ಎಸ್ಟೇಟ್ ಹೂಡಿಕೆಗೆ ಹೆಚ್ಚಿನ ಜನರಿಗೆ ಇಷ್ಟವಾದ ಪ್ರಮುಖ ನಗರ ಎಂದೇ ಗುರುತಿಸಿಕೊಂಡಿದೆ. ಬೆಂಗಳೂರು ನಂತರದಲ್ಲಿ ತನ್ನೊಡಲಲ್ಲಿ ವೈವಿಧ್ಯ­ಮಯ ಕೆಲಸ ಗಳು, ವಿಪುಲ ಉದ್ಯೋಗಾವಕಾಶ, ಕಾಸ್ಮೊಪಾಲಿಟನ್ ಸಂಸ್ಕೃತಿ ಸೇರಿ­ದಂತೆ ಹಲವು ವೈಶಿಷ್ಟ್ಯವನ್ನು ಬಚ್ಚಿಟ್ಟು ಕೊಂಡಿರುವ ಮಾಯಾ ನಗರಿ ಮುಂಬೈ (ಶೇ 10) ಕೂಡ ಮನೆ ಖರೀದಿಸಲು ಬಯಸುವವರನ್ನು ಮರಳು ಮಾಡಿದೆ.
ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದಾಚೆಗೂ ಹರಡಿಕೊಳ್ಳುತ್ತಿರುವ ಮೆಟ್ರೊ ರೈಲು ಸೇವೆ ವಿಸ್ತರಣೆಯೊಂದಿಗೆ ಮೂಲ ಸೌಕರ್ಯ ವಿಭಾಗಗಳಲ್ಲಿ ಆರೋಗ್ಯಕರ ಅಭಿವೃದ್ಧಿ ಹೊಂದುತ್ತಿರುವ ದೆಹಲಿ   (ಸದ್ಯ ಶೇ 11) ಬರುವ ವರ್ಷದಲ್ಲಿ ಮನೆ ಖರೀದಿಗಾರರ ಚಿತ್ತವನ್ನು ತನ್ನತ್ತ ಸೆಳೆದುಕೊಳ್ಳುವ ಸಂಭವವಿದೆ ಎನ್ನುತ್ತದೆ ಸಮೀಕ್ಷೆ.
2014ರಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಮಾಡಲು ಬಯಸುವ ಇತರ ಪ್ರಮುಖ ನಗರ ಪೈಕಿ ಅಹಮದಾಬಾದ್ (ಶೇ 9), ಪುಣೆ (ಶೇ 8) ಮತ್ತು ಹೈದರಾಬಾದ್ (ಶೇ 6) ಮನೆ ಖರೀದಿ ದಾರರ ಗಮನವನ್ನು ತಮ್ಮತ್ತ ಸೆಳೆಯು ತ್ತಿದ್ದರೆ, ಈ ನಗರಗಳ ತರುವಾಯ ಡೆಹ್ರಾಡೂನ್ (ಶೇ 4) ಮತ್ತು ಕೋಲ್ಕತ್ತ (ಶೇ 3) ನಗರ ಕೂಡ ಖರೀದಿದಾರರ ಆದ್ಯತೆಯ ಪಟ್ಟಿಯಲ್ಲಿವೆ.
ಒಟ್ಟು ಮನೆ ಖರೀದಿದಾರರ ಪೈಕಿ ದೊಡ್ಡ ಪ್ರಮಾಣದಲ್ಲಿ ಅಂದರೆ ಶೇ 65ರಷ್ಟು ಖರೀದಿದಾರರು ತಮ್ಮ ಸ್ವಂತ ಬಳಕೆಗಾಗಿ ಮನೆ ಖರೀದಿಸಲು ಮುಂದಾಗಿದ್ದಾರೆ.
ಸಮೀಕ್ಷೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದವರ ಪೈಕಿ ಶೇ 68ರಷ್ಟು ಜನರು ತಾವು ಮನೆ ಖರೀದಿಸುತ್ತಿರುವುದು ಸ್ವಂತ ಉಪಯೋಗಕ್ಕಾಗಿ ಎಂದು ಹೇಳಿದ್ದರೆ, ಶೇ 19ರಷ್ಟು ಜನರು ದೀರ್ಘಾವಧಿ ಹೂಡಿಕೆಗಾಗಿ ಮತ್ತು ಶೇ 13ರಷ್ಟು ಖರೀದಿಗಾರರು ಅಲ್ಪಾವಧಿ ಹೂಡಿಕೆಯ ದೃಷ್ಟಿಯಿಂದ ಮನೆ ಖರೀದಿಸಲು ಬಯಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
2014ರ ಆರಂಭದೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂಡುತ್ತಿರುವ ಈ ಸಂಚಲನಕ್ಕೆ ಗೃಹಸಾಲದ ಬಡ್ಡಿದರಗಳನ್ನು ಸ್ಥಿರ ವಾಗಿಡಬೇಕೆಂಬ ‘ಆರ್‌ಬಿಐ’ ಸಲಹೆಯೇ ಕಾರಣವಾಗಿರುವ ಸಾಧ್ಯತೆ ಇದೆ.
ದೇಶದಾದ್ಯಂತ ಮನೆ ಖರೀದಿಸಲು ಇಚ್ಛಿಸುತ್ತಿರುವವರಲ್ಲಿ ಶೇ 49ರಷ್ಟು ಜನರು 2014ರಲ್ಲಿ ಗೃಹಸಾಲ ಬಡ್ಡಿ ದರಗಳು ಏರಿಕೆಯಾಗಲಿವೆ ಎಂಬ ನಿರೀಕ್ಷೆಯ ಆತಂಕದಲ್ಲಿದ್ದರೆ, ಶೇ 26 ಆಶಾವಾದಿಗಳು ಬಡ್ಡಿದರಗಳು ಕುಸಿಯ ಲಿವೆ ಎಂಬ ಖುಷಿಯಲ್ಲಿದ್ದಾರೆ. ಉಳಿದವರು ಮುಂಬರುವ ವರ್ಷದಲ್ಲಿ ಗೃಹಸಾಲದ ಬಡ್ಡಿದರಗಳು ಸ್ಥಿರವಾಗಿರ ಲಿವೆ ಎಂದೇ ಕನಸು ಕಾಣುತ್ತಿದ್ದಾರೆ.

(
ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಫೆಬ್ರುವರಿ 26, 2014 ರಂದು ಪ್ರಕಟವಾದ ಲೇಖನ)